ಗ್ರಿಫಿನ್, ಜೆರಾಲ್ಡ್ -
 1803-1840. ಐರಿಷ್ ಕವಿ ಮತ್ತು ನಾಟಕಕಾರ. ಲಿಮರಿಕ್‍ನಲ್ಲಿ ಹುಟ್ಟಿ ಕೆಲಕಾಲ ಲಂಡನ್ ಮತ್ತು ಲಿಮರಿಕ್ ನಗರಗಳಲ್ಲಿ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದ. ಮೊದಲಿಗೆ ಅಗ್ಯೂಯಿರ್ ಎಂಬ ಗಂಭೀರ ನಾಟಕವನ್ನು ಬರೆದು ಸ್ನೇಹಿತರ ಹೊಗಳಿಕಗೆ ಪಾತ್ರನಾದ. ಅಂದಿನ ನಾಟಕಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿ ಜನರ ಅಭಿರುಚಿಯನ್ನೇ ಬದಲಿಸುವಂಥ ನಾಟಕಗಳನ್ನು ಸೃಷ್ಟಿಮಾಡಲು ನಿರ್ಧರಿಸಿ 1823ರಿಂದ ಲಂಡನಿನಲ್ಲಿ ನಿಂತ. ಕವಿ ಮತ್ತು ನಾಟಕಕಾರನಾದ ಜಾನ್ ಬನೀಮ್‍ನ ಶೀಫಾರಸ್ಸು ಇದ್ದರೂ ಗ್ರಿಫಿನ್ ಅನೇಕ ತೊಂದರೆಗಳಿಗೆ ಸಿಲುಕಿದ. 1826ರಲ್ಲಿ ನಯಡೀಸ್ ಎಂಬ ಆಪೆರವನ್ನು ಬರೆದು ಪ್ರಖ್ಯಾತನಾದ. ಈತನ ಜನಪ್ರಿಯ ಕೃತಿ ಎನಿಸಿದ ಹಾಲೆಂಡ್ ಟೈಡ್ ಟೇಲ್ಸ್ 1827ರಲ್ಲಿ ಪ್ರಕಟವಾಯಿತು. ಇದನ್ನು ಮನ್ಸ್‍ಟರ್ ಪಾಪ್ಯುಲರ್ ಟೇಲ್ಸ್ ಎಂದೂ ಕರೆಯುತ್ತಾರೆ. ಇದರ ಅನಂತರ 3 ಸಂಪುಟಗಳ ಟೇಲ್ಸ್ ಆಫ್ ದಿ ಮನ್ಸ್‍ಟರ್ ಫೆಸ್ಟಿವಲ್ಸ್ (1827) ಪ್ರಕಟವಾಯಿತು. 1829ರಲ್ಲಿ ಪ್ರಕಟವಾದ ಈತನ ದಿ ಕಲೀಜಿಯನ್ಸ್ ಎಂಬ ಕಾದಂಬರಿ ತುಂಬ ಪ್ರಖ್ಯಾತವಾಯಿತು. ಇದು ಮುಂದೆ ಡಯಾನ್ ಬೂಯಸ್ಸಿಕೊನಿಂದ ರಂಗಭೂಮಿಗೆ ಅಳವಟ್ಟ ನಾಟಕವೊಂದಕ್ಕೆ ಆಧಾರವಾಗಿ ಇನ್ನೂ ಹೆಚ್ಚಿನ ಖ್ಯಾತಿ ಗಳಿಸಿತು. 

ಅನಂತರ ಗ್ರಿಫಿನ್ ಅನೇಕ ಕಾದಂಬರಿಗಳನ್ನು ಬರೆದು ಖ್ಯಾತನಾದುದಲ್ಲದೆ ದೇಶೀಯ ಸೊಬಗನ್ನು ಸೂಸುವ ಭಾವಗೀತೆಗಳನ್ನು ರಚಿಸಿದ. 1838ರಲ್ಲಿ ಈತ ಡಬ್ಲಿನ್‍ನಲ್ಲಿ ಸೊಸೈಟಿ ಆಫ್ ಕ್ರಿಶ್ಚನ್ ಬ್ರದರ್ಸ್ ಎಂಬ ಧರ್ಮಸಂಸ್ಥೆಗೆ ಸೇರಿದ. ಅನಂತರ ನಾರ್ತ್ ಮೊನಾಸ್ಟರಿಗೆ ಬಂದು ಅಲ್ಲಿ ಟೈಫಸ್ ಎಂಬ ಕಾಯಿಲೆಗೆ ತುತ್ತಾಗಿ ಸತ್ತ. ಸಂನ್ಯಾಸಾಶ್ರಮವನ್ನು ಸ್ವೀಕರಿಸುವ ಮುನ್ನ ತನ್ನಲಿದ್ದ ಹಸ್ತಪ್ರತಿಗಳನ್ನೆಲ್ಲ ಸುಟ್ಟುಹಾಕಿದ. ಆದರೆ, ತನ್ನ 20ನೆಯ ವಯಸ್ಸಿಗಿಂತ ಮುಂಚೆ ಬರೆದದಿದ್ದ ಗಿಸಿಪಸ್ ಎಂಬ ನಾಟಕ ಅಕಸ್ಮಾತಾಗಿ ಅಗ್ನಿಗೆ ಆಹುತಿಯಾಗಿರಲಿಲ್ಲ. ಅದು 1842ರಲ್ಲಿ ಪ್ರಕಟವಾಗಿ ರಂಗಭೂಮಿಯನ್ನು ಕಂಡುದಲ್ಲದೆ ಅತ್ಯಂತ ಯಶಸ್ವೀನಾಟಕ ಎನಿಸಿತು. 

1842-43ರಲ್ಲಿ ಈತನ ಎಲ್ಲ ಕೃತಿಗಳನ್ನು ಎಂಟು ಸಂಪುಟಗಳಲ್ಲಿ ಹೊರತರಲಾಯಿತು.
ಈತನ ಇತರ ಕೃತಿಗಳು : ದಿ ಕ್ರಿಶ್ಚನ್ ಪಿಸಿóಯಾಲಜಿಸ್ಟ್ (1830) ; ದಿ ಇಲಸ್ಟ್ರೇಷನ್ ಆಫ್ ಫೈವ್ ಸೆನ್ಸಸ್ (1830) ; ದಿ ಇನ್‍ವೇಷನ್ (1830 ; 4 ಸಂಪುಟಗಳು) ; ದಿ ಟೇಲ್ಸ್ ಆಫ್ ಮೈ ನೈಬರ್‍ಹುಡ್ ; ದಿ ಡ್ಯೂಕ್ ಆಫ್ ಮಾನ್‍ಮತ್ (1836) ; ದಿ ಕೆಲ್ಟ್ ಗ್ಯಾದರರ್ (1854), ದಿ ಡೇ ಆಫ್ ಟ್ರಯಲ್ (1854) ; ದಿ ಕಾಯಿನರ್ (1854). 		
						(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ